ದಾವಣಗೆರೆ,ಸೆಪ್ಟೆಂಬರ್.13: ಮಾಧ್ಯಮಗಳು ವಾಸ್ತವ ಸುದ್ದಿಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಾವಣಗೆರೆಯಲ್ಲಿ ಸಾಹಿತ್ಯ ಸಮ್ಮೇಳನ, ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಡಲಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತರ ಮಕ್ಕಳಿಗೆ ಹಾಗೂ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತಿರುವುದು, ಅವರೆಲ್ಲರ ಜವಾಬ್ದಾರಿ ಹೆಚ್ಚಿಸಿ ಪ್ರೋತ್ಸಾಹಿಸಿದಂತಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಅವಿಭಜಿತ ಜಿಲ್ಲೆಯಾದಾಗ ಕೇಶವಮೂರ್ತಿ, ಷಡಾಕ್ಷರಪ್ಪ, ಪಂಪಾಪತಿ ಸೇರಿದಂತೆ ಅನೇಕರು ಈ ಕ್ಷೇತ್ರದಲ್ಲಿ ತಮ್ಮ ಪ್ರಾಮಾಣಿಕವಾದ ಸೇವೆ ಮಾಡಿದ್ದಾರೆ. ಅಂದಿನ ದಿನಗಳಲ್ಲಿ ಪತ್ರಿಕೆ ಮುದ್ರಣ ಮಾಡಲು ಮೊಳೆಅಚ್ಚು ಜೋಡಿಸಬೇಕಿತ್ತು. ಇಂದು ಕಂಪ್ಯೂಟರ್ ಕಾಲವಾಗಿದ್ದು ಕೆಲಸ ಮಾಡಲು ತಾಂತ್ರಿಕತೆ ಸುಲಭವಾಗಿಸಿದೆ ಎಂದರು.
ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾಭವನದ ಕೊರತೆಯಿದ್ದು ಮಂಜೂರಾತಿ ನೀಡಿರುವ ನಿವೇಶನಕ್ಕೆ ಸರ್ಕಾರದ ಮಟ್ಟದಲ್ಲಿ ರಿಯಾಯಿತಿ ನೀಡಲು ಅನುಮತಿ ಕೊಡಿಸಲಾಗುತ್ತದೆ. ಮತ್ತು ಸುಸಜ್ಜಿತವಾದ ಭವನ ನಿರ್ಮಾಣ ಮಾಡಲು ಹಾಗೂ ಪತ್ರಕರ್ತರ ಮಕ್ಕಳಿಗೆ ನೆರವಾಗಲು ಜನಕಲ್ಯಾಣ ಟ್ರಸ್ಟ್ ಮೂಲಕವೂ ನೆರವು ನೀಡಲಾಗುತ್ತದೆ ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಮಾಧ್ಯಮಗಳು ಸರ್ಕಾರ ಮತ್ತು ಸಮಾಜಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಅಭಿವೃದ್ದಿ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಜನರಿಗೆ ಬೇಕಾಗಿರುವುದೇನು, ಅದನ್ನರಿತು ಹೆಚ್ಚಿನ ಒತ್ತನ್ನು ಮಾಧ್ಯಮಗಳು ನೀಡುವ ಕೆಲಸ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಊಹಾ ಪತ್ರಿಕೋದ್ಯಮ ಬೆಳೆಯುತ್ತಿದ್ದು ಜನರ ವಿಶ್ವಾಸಗಳಿಸಲು ಖಚಿತತೆಯ ಸುದ್ದಿಗೆ ಒತ್ತು ನೀಡಬೇಕೆಂದರು.
ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ನೀಡಬೇಕೆಂಬ ಬೇಡಿಕೆ ಈಡೇರಿರುವುದಿಲ್ಲ. ಈಗಾಗಲೇ ಸರ್ಕಾರದ ಹಂತದಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು ಮುಂದಿನ 15 ದಿನಗಳಲ್ಲಿ ಇದಕ್ಕೆ ಸ್ಪಷ್ಟವಾದ ಆದೇಶಬಿದ್ದು ಚಾಲನೆ ಸಿಗುವ ವಿಶ್ವಾಸವಿದೆ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯಾಜಿ, ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ;ಬಿ.ಕೆ.ರವಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ್, ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ವಾರ್ತಾಧಿಕಾರಿ ಧನಂಜಯ.ಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷರಾದ ಇ.ಎಂ.ಮAಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಫಕೃದ್ದೀನ್ ಸ್ವಾಗತಿಸಿ ಶ್ರೀನಿವಾಸ್ ನಿರೂಪಿಸಿದರು.