ಚಿತ್ರದುರ್ಗ: ಇಲ್ಲಿನ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಮಾಡಲಾಯಿತು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಟು ಸ್ವೀಕಾರ ಮಾಡಿದರು.
ಮಠದ ಆವರಣದಲ್ಲಿರುವ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ವಟು ಸ್ವೀಕಾರ ಧಾರ್ಮಿಕ ಕಾರ್ಯಗಳು ನಡೆದವು. ನೂತನ ವಟುವಿಗೆ ಜಯಬಸವ ದೇವರು ಎಂದು ನಾಮಕರಣ ಮಾಡಲಾಯಿತು.
ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ವಟು ಸ್ವೀಕಾರ ಸಮಾರಂಭದಲ್ಲಿ ಲಿಂಗದೀಕ್ಷೆ, ವಿಭೂತಿಧಾರಣೆ, ಲಿಂಗಧಾರಣೆ, ಹಸ್ತಮಸ್ತಕ ಸಂಯೋಜನೆ, ಪಾದಪೂಜೆ ಸೇರಿದಂತೆ ಬಸವ ತತ್ವದ ಪ್ರಕಾರ ಧಾರ್ಮಿಕ ವಿಧಿ ವಿಧಾನ ನೆರವೇರಿದವು.ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟುವಾಗಿ ಸ್ವೀಕರಿಸಿರುವ ಬಾಲಕನ ಪೂರ್ವಾಶ್ರಮದ ಊರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ. ಸವಿತಾ ಮಹಾಲಿಂಗಪ್ಪ ದಂಪತಿಗಳ ಎರಡನೇ ಪುತ್ರ 9 ವರ್ಷದ ಲಖನ್ ಮಠಕ್ಕೆ ವಟು ಆಗಿದ್ದಾರೆ.ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು. ಇದರಲ್ಲಿ ಎರಡನೇ ಮಗ ಲಖನ್ ಅವರನ್ನು ಮಠಕ್ಕೆ ನೀಡಲಾಗಿದೆ.ಮಠಕ್ಕೆ ನೂತನ ವಟು ಸ್ವೀಕಾರ ಮಾಡಲಾಗಿದೆ.
ಇದೊಂದು ಸಂತಸದ ದಿನ. ಜಯಬಸವ ದೇವರು ಎಂದು ನಾಮಕರಣ ಮಾಡಿದ್ದು, ವಟುವಿನ ಮುಂದಿನ ಶಿಕ್ಷಣ ಮಠದ ಜವಾಬ್ದಾರಿ ಆಗಿದೆ. ಆದಿಚುಂಚನಗಿರಿ ಗುರುಕುಲದಲ್ಲಿ ಶಿಕ್ಷಣ ಕೊಡಿಸಲಾಗುವುದು. ಮುರುಘಾ ಮಠ ಹಾಗೂ ಬಸವ ತತ್ವ ಸಂಪ್ರದಾಯದಲ್ಲೇ ಮುಂದುವರೆಯುತ್ತೇವೆ. ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಜವಾಬ್ದಾರಿಯನ್ನು ಟ್ರಸ್ಟ್ ಹಾಗೂ ಸಮಾಜದ ಹಿರಿಯರಿಗೆ ಬಿಡುತ್ತೇವೆ ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.