ಹರಿಹರ : ಎಂಟು ಗಂಟೆ ಕೆಲಸದ ಮಿತಿಗಾಗಿ ನಡೆಸಿದ ಸತತ ಹೋರಾಟ ಹಾಗೂ ತ್ಯಾಗ ಬಲಿದಾನಗಳ ಪರಿಣಾಮವಾಗಿ ಅಮೇರಿಕಾದ ಚಿಕಾಕೋ ನಗರದಲ್ಲಿ 1886ರ ಮೇ 1ರಂದು ಕಾರ್ಮಿಕ ದಿನಾಚರಣೆ ಜನ್ಮ ತಾಳಿತು, ಎಂದು ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ ಹೇಳಿದರು.
ಅವರು ಮೇ ಒಂದರಂದು ಹರಿಹರ ತಾಲೂಕು ಕಾರ್ಮಿಕರ ಸೇವಾ ಸಂಘಗಳ ಹಿತ ರಕ್ಷಣಾ ಸಮಿತಿ ರವರು ನಗರದ ಮುರುಘರಾಜೇಂದ್ರ ಕಲ್ಯಾಣ ಮಂಟಪ ಹತ್ತಿರವಿರುವ ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ “ಮೇ ದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೇ ದಿನಾಚರಣೆ ಹಿಂದೆ ದೊಡ್ಡದಾದ ಹೋರಾಟದ ಇತಿಹಾಸವಿದೆ. 19ನೇ ಶತಮಾನಕ್ಕೂ ಹಿಂದಿನಿಂದಲೂ ನಡೆದ ಹೋರಾಟದಲ್ಲಿ ಲಕ್ಷಾಂತರ ಶ್ರಮಜೀವಿಗಳ ಬಲಿದಾನವಾಗಿದೆ. ಎಂಟು ಗಂಟೆ ಕೆಲಸದ ಮಿತಿಗಾಗಿ ನಡೆಸಿದ ಹೋರಾಟದಲ್ಲಿ ಮಾಂಸದಂಗಡಿಯ ಕೆಲಸಗಾರರು, ಹತ್ತಿ ಗಿರಣಿ ಕೆಲಸಗಾರರು, ರೈಲ್ವೆ ಕಾರ್ಮಿಕರು, ಇತರೆ ಶ್ರಮಜೀವಿಗಳು ಹೋರಾಟ ಮಾಡಿದ ಇತಿಹಾಸವಿದ್ದು, ಇಂದು ವಿಶ್ವ ವ್ಯಾಪ್ತಿ ಮೇ – ದಿನಾಚರಣೆ ಆಚರಿಸುತ್ತಿರುವುದು ಶ್ರಮಜೀವಿಗಳಿಗೆ ಸಂತಸ ಕೊಡುವ ದಿನವಾಗಿದೆ ಎಂದರು.
ತ್ಯಾಗ ಬಲಿದಾನದಿಂದ ಪಡೆದ ಎಂಟು ಗಂಟೆ ಕೆಲಸದ ಅವಧಿ, ಇಂದು ಅಪಾಯದಲ್ಲಿದೆ ಎಂದು ಎಚ್ಚರಿಸಿದರು.
ಕೆಂಪು ಅಂದರೆ ಡೇಂಜರ್ ಅಲ್ಲ. ಅದು ಹೋರಾಟದ ಸಮಯದಲ್ಲಿ ಶ್ರಮಜೀವಿಗಳ ರಕ್ತದಲ್ಲಿ ಮಿಂದ ಬಟ್ಟೆಯ ಕೆಂಪು. ಪರಿಶ್ರಮಕ್ಕೆ ತಕ್ಕ ಕೂಲಿ ಕೇಳುತ್ತೇವೆ ವಿನಹ ಯಾರ ಆಸ್ತಿ ಯನ್ನು ಕಸಿದುಕೊಳ್ಳುವ ಜಾಯಮಾನದವರು ಶ್ರಮಿಕರಲ್ಲ ವೆಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಲ್ ಬಿ ಹನುಮಂತಪ್ಪ ನವರು ಮಾತನಾಡಿ, ಇಲ್ಲಿರುವ ಬಹುತೇಕ ಕಾರ್ಮಿಕ ಸಂಗಾತಿಗಳ ಒಡನಾಟ ನನಗಿದೆ. ಕಾರ್ಮಿಕರ ಸಮಸ್ಯೆಗಳು ನನಗೂ ಸಹ ತಿಳಿದಿದೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ ನಿಮ್ಮ ಜೊತೆಗೆ ನಾವು ಸದಾ ಇರುತ್ತೇವೆ ಎಂದು, ಕಾರ್ಮಿಕ ದಿನಾಚರಣೆಗೆ ಶುಭ ಕೋರಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್ ರವರು ಮಾತನಾಡಿ, ಕಾರ್ಮಿಕರ ಕ್ಷೇಮಾಭಿವೃದ್ಧಿ ಬಗ್ಗೆ ನಮ್ಮ ಸಹಕಾರ ಯಾವಾಗಲೂ ಇರುತ್ತೆ, ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕ ಕುಟುಂಬದವರಿಗೆ ಸ್ಪೋರ್ಟ್ಸ್ ಅರೆಂಜ್ ಮಾಡಿದರೆ, ಕಾರ್ಮಿಕ ಕುಟುಂಬದವರಿಗೂ ಸಂತೋಷವಾಗುತ್ತೆ. ನಾನು ಸ್ಪೋರ್ಟ್ಸ್ ಮೇನ್ ಆಗಿರುವ ಕಾರಣ ಇದು ನನ್ನ ಸಲಹೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಎಂಎಚ್ ಭೀಮಣ್ಣನವರು ಮಾತನಾಡಿ, ಕಟ್ಟಡ ಕಾರ್ಮಿಕರ ಸಮುದಾಯ ಭವನಕ್ಕೆ ಎಲ್ಲಾ ಪಕ್ಷದವರ ಸಹಕಾರ ಕೋರಿ, ಮೇ 7 ರಂದು ತಪ್ಪದೇ ಎಲ್ಲರೂ ಮತದಾನ ಮಾಡಲು ಕೋರಿದರು.
ಮಂಜಣ್ಣ ಕೊಕುನೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ನಾಗರಾಜ್ ಶಿಲ್ಪಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿ, ಕೊನೆಗೆ ವಂದನಾರ್ಪಣೆ ಮಾಡಿದರು.