ಬೆಂಗಳೂರು,ಅ.28: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್‌ನಲ್ಲಿನ 70 ಶಾಸಕರ ಬೆಂಬಲ ಇದೆ ಎಂದು ಪುನರುಚ್ಚರಿಸಿರುವ ಚೆನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್, ಈ ಐದು ವರ್ಷದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದಿದ್ದಾರೆ.
ಅಧಿಕಾರ ಹಂಚಿಕೆ, ಪಕ್ಷ ಹಾಗೂ ಸರ್ಕಾರದ ಕುರಿತಂತೆ ಶಾಸಕರು ಹಾಗೂ ನಾಯಕರು ಬಹಿರಂಗ ಹೇಳಿಕೆ ನೀಡಬಾರದು ಎಂದು ಇಂದು ಬೆಳಗ್ಗೆಯಷ್ಟೆ ಕಟ್ಟಪ್ಪಣೆ ಮಾಡಿದರು. ಅದರ ಹೊರತಾಗಿಯೂ ಮತ್ತೆ ಶಿವಗಂಗಾ ಬಸವರಾಜ್ ಸುದ್ದಿಗಾರರೊಂದಿಗೆ ಮಾತನಾಡಿದ್ದು ಡಿ.ಕೆ.ಶಿವಕುಮಾರ್ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿಯಾಗೇ ಆಗುತ್ತಾರೆ ಎಂದು ಹೇಳಿದ್ದಾರೆ. ನಾನು ಮತ್ತು ನಮ್ಮ ಸ್ನೇಹಿತರು ಬಣ ರಾಜಕೀಯದ ಬಗ್ಗೆ ಮಾತನಾಡಿಲ್ಲ. ನಾವು ಹೇಳಿರುವುದು ಒಂದೇ ಬಣ, ಕಾಂಗ್ರೆಸ್ ಬಣ. 60ರಿಂದ 70 ಶಾಸಕರು ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ಇದ್ದೇವೆ ಎಂದು ನಾನು ಸಹಜವಾಗಿ ಹೇಳಿದ್ದೇನೆ. ಉಳಿದವರ ಬೆಂಬಲ ಇಲ್ಲ ಎಂದಲ್ಲ. 135 ಶಾಸಕರು ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ಇದ್ದಾರೆ. ಇದರಲ್ಲಿ ಹಿರಿಯರು, ಕಿರಿಯರು ಎಂಬುದಿಲ್ಲ ಎಂದರು.
ಪ್ರಮುಖವಾಗಿ ನಮ್ಮ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಕೊಟ್ಟು, ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಗೆಲ್ಲಿಸಿದ ಡಿ.ಕೆ.ಶಿವಕುಮಾರ್ ಅವರ ಪರವಾಗಿ 70 ಶಾಸಕರಿದ್ದೇವೆ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಪರ-ವಿರೋಧ ಎಂದು ಹೇಳಲು ನಾವು ಬಯಸುವುದಿಲ್ಲ. ನಾವು ಡಿ.ಕೆ.ಶಿವಕುಮಾರ್ ಪರವಾಗಿದ್ದೇವೆ ಎಂದು ಹೇಳಿದ್ದೇವೆಯೇ ಹೊರತು ಮತ್ತೊಬ್ಬರಿಗೆ ವಿರುದ್ಧವಾಗಿದ್ದೇವೆ ಎಂದು ಹೇಳಿಲ್ಲ. ನಾವು ಎಲ್ಲರೂ ಒಂದು ಎಂದರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ನಾನು ಮೊದಲೇ ಈ ಬಗ್ಗೆ ಹೇಳಿದ್ದೇನೆ. ಚುನಾವಣೆ ಫಲಿತಾಂಶದ ಬಳಿಕ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿಯಾಗುವ ವಾಡಿಕೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಸಿದ್ದರಾಮಯ್ಯಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ.
ಕೊನೆಯ ಅವಕಾಶ ಎಂದು ಮತ್ತು ಹಿಂದಿನ ಐದು ವರ್ಷ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ ಎಂಬ ಕಾರಣಕ್ಕೆ ಎಲ್ಲಾ ಶಾಸಕರು ಗೌರವಯುತವಾಗಿ ಬೆಂಬಲ ನೀಡಿದ್ದರು. ಅದನ್ನು ಪರಿಗಣಿಸಿ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದೆ. ತದನಂತರ ಡಿ.ಕೆ.ಶಿವಕುಮಾರ್ ಅವರನ್ನು ನಾವೇಲ್ಲಾ ಸೇರಿ ನೂರಕ್ಕೆ ನೂರು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದರು.
ಸಹಜವಾಗಿ ಅಧಿಕಾರದ ಅವಧಿಯನ್ನು ಎರಡು ಭಾಗವಾಗಿ ವಿಂಗಡಿಸುತ್ತೇವೆ. ಐದು ವರ್ಷ ಇದ್ದರೆ ಅದರಲ್ಲಿ ಎರಡುವರೆ ವರ್ಷ ಅಧಿಕಾರ ಹಂಚಿಕೆಯಾಗುವ ಸಾಧ್ಯತೆ ಇರುತ್ತದೆ. ಆ ಹಿನ್ನೆಲೆಯಲ್ಲಿ ಈ ಐದು ವರ್ಷದ ಒಳಗೆ ಡಿ.ಕೆ.ಶಿವಕುಮರ‍್ರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಪಕ್ಷ ಸಂಘಟನೆ ಮಾಡಿ ಡಿ.ಕೆ.ಶಿವಕುಮಾರ್ ನಮ್ಮನ್ನು ಗೆಲ್ಲಿಸಿದ್ದಾರೆ ಎಂಬ ಭಾವನೆ ಇರುವ ಎಲ್ಲರೂ ಅವರಿಗೆ ಬೆಂಬಲವಾಗಿದ್ದಾರೆ ಎಂದಿದ್ದಾರೆ.