ಬೆಂಗಳೂರು,ಅ.25: ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ತೀವ್ರವಾಗಿದ್ದು, ಹುಲಿ, ಜಿಂಕೆ, ಕರಡಿಗಳಂತಹ ಪ್ರಾಣಿಗಳ ಚರ್ಮ ಹಾಗೂ ಇತರ ಅವಶೇಷಗಳ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ. ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸ್ರ್ಪಧಿಯಾಗಿದ್ದ ವರ್ತೂರು ಸಂತೋಷ್ ವಿರುದ್ಧ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಷ್ಠಾನದ ಕುರಿತು ಚರ್ಚೆಗಳು ವ್ಯಾಪಕಗೊಳ್ಳುತ್ತಿದೆ.
ವಿಧಾನಪರಿಷತ್‍ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಿ.ಆರ್.ರಮೇಶ್ ಅವರು, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್‍ರವರಿಗೆ ದೂರು ನೀಡಿದ್ದು, ಹುಲಿ ಉಗುರಿನ ಡಾಲರ್ ಹೊಂದಿರುವ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಜಾವೇದ್ ಅಖ್ತರ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ದೂರನ್ನು ರವಾನೆ ಮಾಡಿರುವುದಾಗಿ ರಮೇಶ್ ಅವರಿಗೆ ತಿಳಿಸಿದ್ದಾರೆ. ಇದರ ಜೊತೆಯಲ್ಲಿ ನಟರಾದ ದರ್ಶನ್, ನಿಖಿಲ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಗೌರಿಗದ್ದೆಯ ವಿನಯ್ ಗುರೂಜಿ, ತುಮಕೂರು ಜಿಲ್ಲೆಯ ಬಿದನಗೆರೆ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಧರ್ಮದರ್ಶಿ ಧನಂಜಯ ಗುರೂಜಿ ಸೇರಿದಂತೆ ಹಲವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಡಗಳು ಹೆಚ್ಚಾಗುತ್ತಿವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿಗಳ ಅಂಗಾಂಗ ಮತ್ತು ಅವಶೇಷಗಳ ಮಾರಾಟ, ಬಳಕೆ ಸಂಪೂರ್ಣ ನಿಷಿದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಹಲವಾರು ಮಂದಿ ಅದೃಷ್ಟ ಹಾಗೂ ಶುಭಸೂಚಕ ಎಂಬ ನಂಬಿಕೆಯ ಮೇಲೆ ಹುಲಿ ಉಗುರಿನ ಪದಕಗಳು, ಆನೆಬಾಲದ ಕೂದಲಿನ ಉಂಗುರ ಧರಿಸುವುದು ಸೇರಿದಂತೆ ಹಲವಾರು ಉಲ್ಲಂಘನೆಗಳನ್ನು ಮಾಡುತ್ತಿದ್ದಾರೆ. ಇದು ನಂಬಿಕೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಈವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ವರ್ತೂರು ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮುನ್ನಲೆಗೆ ಬಂದಿದೆ. ಬಿಗ್‍ಬಾಸ್ ಸ್ರ್ಪಧಿಯ ವಿರುದ್ಧ ಕ್ರಮ ಕೈಗೊಂಡಂತೆ ಪ್ರಭಾವಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.