-4.7 C
New York
Tuesday, December 24, 2024

Buy now

spot_img

ಮತ್ತಿ ಗ್ರಾಮದಲ್ಲಿ ವಾಂತಿ – ಭೇದಿ ಪ್ರಕರಣ: ಇಬ್ಬರ ಸಾವು ಗ್ರಾಮಸ್ಥರ ಆರೋಪ

ದಾವಣಗೆರೆ: ತಾಲೂಕಿನ ಮತ್ತಿ ಗ್ರಾಮದ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಒಂದೇ ವಾರದಲ್ಲಿ ಇಬ್ಬರು ವೃದ್ಧರು ವಾಂತಿಬೇಧಿಯಿಂದ ಸಾವನಪ್ಪಿದ್ದಾರೆ ಎಂಬ ಆರೋಪವನ್ನು ಇಲ್ಲಿನ ಗ್ರಾಮಸ್ಥರು ಮಾಡುತ್ತಿದ್ದಾರೆ. ವಾಂತಿ – ಭೇದಿಯಿಂದ ಕಳೆದ ಶನಿವಾರ ಮತ್ತು ಭಾನುವಾರ ಮತ್ತಿ ಗ್ರಾಮದ (80) ವರ್ಷದ ಶಾಂತಮ್ಮ ಹಾಗೂ (70) ವರ್ಷದ ಸೋಮಣ್ಣ ಎಂಬವರು ತೀವ್ರ ಅಸ್ವಸ್ಥರಾಗಿ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಈಗಾಗಲೇ ಗ್ರಾಮದಲ್ಲಿ 30-40 ಜನ ವಾಂತಿ – ಭೇದಿಯಿಂದ ಅಸ್ವಸ್ಥರಾಗಿದ್ದು, ಕೆಲವರು ಚಿಕಿತ್ಸೆ  ಪಡೆದು ಮನೆ ಸೇರಿದ್ದಾರೆ. ಇದಲ್ಲದೇ ತೀವ್ರ ಅಸ್ವಸ್ಥರಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದವರು, ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾರೆ ಎಂದು ಗ್ರಾಮಸ್ಥರು ಹಾಗು ಮೃತರ ಸಂಬಂಧಿಕರು ಆರೋಪ ಮಾಡಿದ್ದಾರೆ.

ಇನ್ನು ಇದೇ ಗ್ರಾಮದ ಮಹಿಳೆಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರೆ, ದಾವಣಗೆರೆ ಚಿಗಟೇರಿಯ ಇನ್ನೊಬ್ಬ ಮಹಿಳೆ ಹಾಗೂ ವೃದ್ದರೊಬ್ಬರು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ಗ್ರಾಮದಲ್ಲಿ ನೀರು ಸೇವೆನೆಯಿಂದ ಈ ರೀತಿ ಆಗಿದೆ ಎಂದು ತಿಳಿಸಿದ್ದಾರೆ ಎಂದು ಅಸ್ವಸ್ಥರಾದವರು ಹೇಳುತ್ತಿದ್ದಾರೆ.

ದುರಂತ ಎಂದರೆ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದರು ಕೂಡ ವೈದ್ಯರ ತಂಡ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇನ್ನು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹೈರಾಣಾದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ: ದಾವಣಗೆರೆ ತಾಲೂಕಿನ ಮತ್ತಿ ಗ್ರಾಮದ ವಾಂತಿ – ಭೇದಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೆ ಸ್ಪಷ್ಟನೆ ನೀಡಿದೆ. ಅಷ್ಟೇ ಅಲ್ಲ ವಾರ್ತಾ ಇಲಾಖೆ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಸುಮಾರು ಒಂದು ವಾರದ ಹಿಂದೆ ಒಂದೇ ಕುಟುಂಬದ 3 ಜನರು ಚಿತ್ರದುರ್ಗ ಜಿಲ್ಲೆಯ ಚಿಕ್ಕಂದವಾಡಿ ಎಂಬ ಹಳ್ಳಿಗೆ ಹೋಗಿ ಬಂದ ಮೇಲೆ ಹೊಟ್ಟೆ ನೋವು, ವಾಂತಿ ಭೇದಿ ಎಂದು ದಾವಣಗೆರೆಯ ಬಾಪೂಜಿ ಮತ್ತು ಚಿಗಟೇರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಹಳ್ಳಿಗೆ ಹಿಂದಿರುಗಿದ್ದಾರೆ.

9 ನೇ ತಾರೀಖು ಅದೇ ಹಳ್ಳಿಯ 7 ಜನರ ಒಂದು ಕುಟುಂಬದಲ್ಲಿ ಸುಮಾರು 75 ವರ್ಷದ ವ್ಯಕ್ತಿ, ಅವರ ಪತ್ನಿ, ಮೊಮ್ಮಗ ಹೊಟ್ಟೆ ನೋವು, ವಾಂತಿ ಭೇದಿಯಿಂದ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ವ್ಯಕ್ತಿಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಕ್ತದ ಒತ್ತಡ ಕಡಿಮೆಯಾಗಿ ಮೃತಪಟ್ಟಿರುತ್ತಾರೆ.

ಉಳಿದ ಕುಟುಂಬದವರು ಚಿಕಿತ್ಸೆ ಪಡೆದು ಗ್ರಾಮಕ್ಕೆ ಹಿಂದಿರುಗಿದ್ದಾರೆ. ಇನ್ನೊಂದು ಕುಟುಂಬದಲ್ಲಿ ಇಬ್ಬರು ವ್ಯಕ್ತಿಗಳಿಗೆ ಇದೇ ಲಕ್ಷಣಗಳು ಇದ್ದು ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಹಿಂದೆ ಸುಮಾರು 70 ವರ್ಷದ ವೃದ್ಧೆ ಒಬ್ಬರು ವಯಸ್ಸಿನ ಕಾರಣಗಳಿಂದ ಮೃತಪಟ್ಟಿರುತ್ತಾರೆ. ಗ್ರಾಮದಲ್ಲಿ ನೀರಿನ ಮಾದರಿಗಳನ್ನು ನಿಗದಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯು ಒಂದು ವಾರದಿಂದ ಈ ಕ್ಷೇತ್ರದಲ್ಲಿ ಭೇಟಿ ನೀಡುತ್ತಿದ್ದು, ವರದಿ ಸಂಗ್ರಹಿಸಿ ಸೂಕ್ತ ಆರೋಗ್ಯ ಶಿಕ್ಷಣ, ತಿಳಿವಳಿಕೆ ನೀಡುತ್ತಿದ್ದಾರೆ. ಹೀಗಾಗಿ ಯಾವುದೇ ಆತಂಕವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles