ಶಿವಮೊಗ್ಗ: ಭದ್ರಾನದಿ ಹಾಗೂ ಅದರ ಪಾವಿತ್ರ್ಯತೆ ಕಾಪಾಡಲು ಸೆ.30ರ ಸೋಮವಾರ ಬೆಳಿಗ್ಗೆ 7.30ಕ್ಕೆ ಭದ್ರಾ ಜಲಾಶಯದಿಂದ ಭದ್ರಾವತಿ ನಗರದವರೆಗೂ ನಿರ್ಮಲ ಭದ್ರಾ ಅಭಿಯಾನದಡಿ ಬೃಹತ್ ಜಲಜಾಗೃತಿ ಜನಜಾಗೃತಿ ಪಾದಯಾತ್ರೆಯನ್ನು ಏರ್ಪಡಿಸಲಾಗಿದೆ.
ನದಿಗಳ ಹರಿವು ಸದಾ ಇರುವಂತೆ ಮಾಡಲು ಜಲಾನಯನ ಪ್ರದೇಶಾಭಿವೃದ್ಧಿ ಯೋಜನೆ ರೂಪಿಸಲು ಸರ್ಕಾರವನ್ನು ಒತ್ತಾಯಿಸುವುದು, ಜಲ ಜೀವರಾಶಿಗಳ ಸಂರಕ್ಷಣೆ, ನಗರ-ಗ್ರಾಮಗಳ ತ್ಯಾಜ್ಯ ನೀರು ನದಿಗಳಿಗೆ ಬಿಡದ ಹಾಗೆ ನೀರು ಶುದ್ದೀಕರಣ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಜನಜಾಗೃತಿ ಮಾಡಲು ಸರ್ಕಾರ ಸಕಾಲಿಕ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದು.
ಮುಂಬರುವ ನವೆಂಬರ್ 04ರಿಂದ ಆರಂಭವಾಗುವ ನಿರ್ಮಲ ತುಂಗ-ಭದ್ರಾ ಪಾದಯಾತ್ರೆಯ ಮುನ್ನವಾಗಿ ಒಂದು ದಿನದ ನಿರ್ಮಲ ಭದ್ರಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ದಾವಣಗೆರೆ ಜಿಲ್ಲೆಯ ಪರಿಸರಾಸಕ್ತರು, ಸಾಧು-ಸಂತರು, ಮಠಾಧೀಶರು, ರೈತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೆ.30ರ ನಿರ್ಮಲ ಭದ್ರಾ ಅಭಿಯಾನದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕಕ ನದಿಗಳ ಸ್ವಚ್ಛತೆ ಕಾಪಾಡಲು ಮುಂದಾಗೋಣ. ಎಲ್ಲರೂ ಬಂದು ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹರಿಹರದ ಅವಧೂತ ಸದ್ಗುರು ಕವಿಗುರುರಾಜ ಗುರೂಜಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಪಾದಯಾತ್ರೆಯಲ್ಲಿ ನ್ಯಾಯವಾದಿ ಹಾಗೂ ಶ್ರೀ ವಿದ್ಯಾನಿಧಿ ಫೌಂಡೇಶನ್‌ನ ವ್ಯವಸ್ಥಾಪಕ ವೀರೇಶ್ ಅಜ್ಜಣ್ಣನವರ್, ಅವನಿಕಾ ಟ್ರಸ್ಟ್‌ನ ನಿರ್ದೇಶಕಿ ಶ್ರೀಮತಿ ಕೆ.ಸಿ.ಶಾಂತಾಕುಮಾರಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು