ಹರಿಹರ, ಸೆ.25: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ ಮಾಡಿ ವಿಪಕ್ಷದವರು ದೊಡ್ಡ ಜಯ ಸಿಕ್ಕಂತೆ ವರ್ತನೆ ಮಾಡುತ್ತಿದ್ದು, ನ್ಯಾಯಾಲಯವು ತನಿಖೆ ಮಾಡಿ ಎಂದು ಆದೇಶ ನೀಡಿದ ತಕ್ಷಣವೇ ಸಿದ್ದರಾಮಯ್ಯ ತಪ್ಪಿತಸ್ಥರು ಎಂದು ಭಾವಿಸಿ, ರಾಜೀನಾಮೆ ನೀಡಬೇಕೆಂದಿಲ್ಲ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಡಾ ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜಾಪ್ರತಿನಿಧಿ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಆದೇಶವನ್ನು ನೀಡಿದೆ. ಆದೇಶ ನೀಡಿದ ತಕ್ಷಣವೇ ತಪ್ಪಿತಸ್ಥರೆಂದು ನಿರ್ಣಯಿಸುವುದು ಸರಿಯಲ್ಲ.
ಸಿದ್ದರಾಮಯ್ಯನವರು ಬಡವರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಾಕಷ್ಟು ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇವರ ಆಡಳಿತ ವೈಖರಿ ನೋಡಿ ಇತರೆ ರಾಜ್ಯದ ಜನತೆ ನಮ್ಮ ರಾಜ್ಯಕ್ಕೆ ಈ ತರಹದ ಸಿಎಂ ಇರಬೇಕಿತ್ತು ಎಂದು ಮಾತನಾಡುತ್ತಿದ್ದಾರೆ. ಇಂತಹ ದಕ್ಷ ಆಡಳಿತಗಾರರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂದು ಬಿಜೆಪಿ ಹಿಂದಿನಿಂದ ಅವರ ಹೆಸರಿಗೆ ಕಳಂಕವನ್ನು ತರುವಂತ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಜನಾರ್ದನ್ ರೆಡ್ಡಿಯವರು ರಾಜ್ಯ ಮತ್ತು ವಿದೇಶದಲ್ಲಿ ಬೇಕಾದಷ್ಟು ಆಸ್ತಿ ಹೊಂದಿದ್ದಾರೆ. ಅವರ ಮೇಲೆ ಪ್ರಕರಣಗಳಿ ದ್ದರೂ ಸಹ, ರಾಜ್ಯಪಾ ಲರು ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳದೆ, ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿ ದುರಹಂಕಾರದ ವರ್ತನೆ ಯನ್ನು ಮಾಡುತ್ತಿದ್ದು, ಇದು ಅವರ ಕೊನೆಯ ಘಳಿಗೆ ಹತ್ತಿರ ಬಂದಂತೆ ಕಾಣಿಸುತ್ತದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಮಾತನಾಡಿ, ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ. ಪ್ರಭಾವ ಬೀರಿಲ್ಲ. ಅಷ್ಟೊಂದು ಪ್ರಾಮಾಣಿಕತೆಯಿಂದ ರಾಜಕೀಯಮಾ ಡಿಕೊಂಡು ಬಂದಿದ್ದಾರೆ. ಅಂತಹ ದಕ್ಷ ಆಡಳಿತಗಾರರಿಗೆ ತಾಲ್ಲೂಕು ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲುವಮೂಲಕ ಅವರನ್ನು ಯಾವುದೇ ಕಾರಣಕ್ಕೂ ರಾಜೀನಾಮೆ ನಿಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಪಕ್ಷದ ಮುಖಂಡರಾದ ಮಲ್ಲಿನಾಥ್, ನಗರಸಭೆ ಮಾಜಿ ಸದಸ್ಯರಾದ ಮಹಮ್ಮದ್ ಫೈರೋಜ್, ಮಹಮ್ಮದ್ ಸಿಗ್ನತ್ ಉಲ್ಲಾ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ ಹನುಮಂತಪ್ಪ, ಅಬಿದಾಲಿ, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಕುಣೆಬೆಳಕೆರೆ ರುದ್ರಪ್ಪ, ಕೊಟ್ಟ. ನಾಯ್ಕ ಯಲವಟ್ಟಿ, ರಾಹುಲ್, ಮಂಜುನಾಥ್, ಭಾಗ್ಯಮ್ಮ ಇತರರಿದ್ದರು.