ದಾವಣಗೆರೆ; ಸೆ.21: ಸೆಪ್ಟೆಂಬರ್ 21 ರಂದು ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಂಗವಾಗಿ ಕುಂದುವಾಡ ಕೆರೆ ಏರಿಯ ಸುತ್ತಲೂ ಹಾಕಲಾಗಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಸೇರಿದಂತೆ ಘನತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಾಲಿಕೆ ಪೌರಕಾರ್ಮಿಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು ಸೇರಿ ಕುಂದುವಾಡ ಕೆರೆ ಏರಿ ಸೇರಿದಂತೆ ಕೆರೆ ದಡದಲ್ಲಿದ್ದ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಲಾಯಿತು. ಕೆರೆಯ ಏರಿಯ ಮೇಲೆ ಇಕ್ಕೆಲುಗಳಲ್ಲಿ ಮತ್ತು ಏರಿಯ ದಡದಲ್ಲಿ ತೇಲುತ್ತಿದ್ದ ಪಾಟಲ್ಗಳು, ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಪಾಲಿಕೆ ವಾಹನಕ್ಕೆ ಹಾಕಲಾಯಿತು.
ಕುಂದುವಾಡ ಕೆರೆಯನ್ನು ಸುಂದರವಾಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಪುನರ್ ನವೀಕರಿಸಿದ್ದು ಈ ಕೆರೆಯಿಂದ ದಾವಣಗೆರೆ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಕೆರೆಯ ಸುತ್ತಲೂ ಕಬ್ಬಿಣದ ಸರಳುಗಳಿಂದ ತಡೆಗೋಡೆ ನಿರ್ಮಿಸಿದ್ದರೂ ಸಹ ಜನರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕಿರುವುದು ಕಂಡು ಬಂದಿತು. ಕೆರೆ ಏರಿ ಸುತ್ತಲೂ 4.1 ಕಿ.ಮೀ ಗಿಂತಲೂ ಹೆಚ್ಚು ಸುತ್ತಳತೆಯನ್ನು ಹೊಂದಿದ್ದು ಶೇ 25 ರಷ್ಟು ದಾವಣಗೆರೆ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.
ಕುಂದುವಾಡ ಕೆರೆ ಪ್ರಶಾಂತ ವಾತಾವಣರದಿಂದ ಕೂಡಿದ್ದು ವಾಕಿಂಗ್ ಸ್ಥಳವಾಗಿದೆ. ಇಲ್ಲಿ ಬೆಳಗಿನ ವೇಳೆ ಹಾಗೂ ಸಂಜೆ ವಾಯು ವಿಹಾರಿಗಳು ವಾಕಿಂಗ್ ಮಾಡುತ್ತಾರೆ. ದಾವಣಗೆರೆ ನಗರಕ್ಕೆ ಅತ್ಯವಶ್ಯಕಾದ ಸ್ಥಳ ಇದಾಗಿದ್ದು ಇಲ್ಲಿನ ಸ್ವಚ್ಛತೆ, ಪರಿಸರ ಕಾಪಾಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ.
ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಭಾಗವಹಿಸಿ ಸಸಿ ನೆಟ್ಟು ನೀರೆರೆದು ಕಸ ಸಂಗ್ರಹಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಶಿಲ್ಪಾ ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.