ದಾವಣಗೆರೆ: ವರದಕ್ಷಿಣೆ ಕಿರುಕುಳದಿಂದ ನೊಂದು ಗೃಹಿಣಿ ನೇಣಿಗೆ ಶರಣಾಗಿದ್ದ ಪ್ರಕರಣದಲ್ಲಿ ಮೃತಳ ಪತಿಗೆ ಸ್ಥಳೀಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್, 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಚನ್ನಗಿರಿ ತಾಲೂಕು ಮೇದುಗೊಂಡನಹಳ್ಳಿ ಗ್ರಾಮದ ಮಂಜುನಾಥ (30) ಶಿಕ್ಷೆಗೆ ಗುರಿಯಾದ ಆರೋಪಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಮಾರುತಿ ನಗರದ ನಿಂಗಮ್ಮ ಎಂಬುವರು ತನ್ನ 3ನೇ ಮಗಳು ಶೋಭಾರಾಣಿಯನ್ನು ಮಂಜುನಾಥನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲಿ 50ಗ್ರಾಂ ಬಂಗಾರ, 150ಗ್ರಾಂ ಬೆಳ್ಳಿಹಾಗೂ 3 ಲಕ್ಷ ರೂ. ನಗದು ನೀಡಲಾಗಿತ್ತು. ಆದರೆ ವಿವಾಹ ಮಾಡಿಕೊಟ್ಟ ದಿನದಿಂದಲೂ ಪತಿ ಹಾಗೂ ಆತನ ಮನೆಯವರು ತವರಿನಿಂದ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಶೋಭಾರಾಣಿ, 2020ರ ಡಿಸೆಂಬರ್ 14ರಂದು ನೇಣು ಹಾಕಿಕೊಂಡು ಮೃತಪಟ್ಟಿದ್ದರು. ಮಗಳ ಸಾವಿಗೆ ಪತಿ ಹಾಗೂ ಆತನ ಮನೆಯವರೇ ಕಾರಣ ಎಂದು ನಿಂಗಮ್ಮ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳ್ಳಿ, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 35,000 ರೂ. ಸಂತ್ರಸ್ಥೆ ಕುಟುಂಬದವರಿಗೆ ನೀಡಿ, 5,000 ರೂ. ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣದಲ್ಲಿ ದೂರುದಾರರ ಪರ ಸರಕಾರಿ ವಕೀಲ ಕೆ.ಎಸ್. ಸತೀಶ್ ವಾದ ಮಂಡಿಸಿದ್ದರು.