ಚನ್ನಗಿರಿ. ಸೆ. 21: ಚಿಕ್ಕ ಮಾಡಾಳು ಬಳಿ ನಿರ್ಮಾಣವಾಗುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿಯುತ ಶಾಲೆ ಕಟ್ಟಡದ ಪ್ರಗತಿಯನ್ನು ಶಾಸಕರಾದ ಬಸವರಾಜು ವಿ ಶಿವಗಂಗಾ ಪರಿಶೀಲನೆ ಮಾಡಿದರು. ಶಾಲಾ ಕಟ್ಟಡ ಮುಕ್ತಾಯ ಹಂತಕ್ಕೆ ಬಂದಿದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಕ್ಕೆ ಸೂಚಿಸಿದರು.
ಕಟ್ಟಡ ನಿರ್ಮಾಣ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಸದ್ಯ ಶಾಲೆ ನಡೆಯುತ್ತಿದೆ, ಇದೀಗ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ನೂತನ ಶಾಲಾ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಶಾಸಕರು ತಿಳಿಸಿದರು. ಕಟ್ಟಡ ನಿರ್ಮಾಣ ಗುಣಮಟ್ಟದಿಂದ ಇರುಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡದರು. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ವಸತಿ ಯುತ ಶಾಲೆಯಾದ ಹಿನ್ನೆಲೆ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ವಸತಿ ಶಾಲೆಗೆ ದಾಖಲಾಗಲು ಪ್ರತಿವರ್ಷ ಹೆಚ್ಚು ಬೇಡಿಕೆ ಇದೇ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇದಕ್ಕೆ ಕಾರಣ ಉಚಿತವಾಗಿ ವಸತಿಯೊಂದಿಗೆ ಉತ್ತಮ ಶಿಕ್ಷಣ ಕಲ್ಪಿಸುತ್ತಿರುವುದು ಎಂದರು. ನಮ್ಮ ತಾಲ್ಲೂಕಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಬದ್ಧವಾಗಿದ್ದು ಶೀಘ್ರದಲ್ಲೇ ಈ ಶಾಲೆ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡುತ್ತೇವೆ ಎಂದರು. ಈ ವೇಳೆ ಇಂಜಿನಿಯರ್ ಗಳು, ಪ್ರಾಚಾರ್ಯರಾದ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲ್ಲೂಕಿನ ಮುಖಂಡರುಗಳು ಉಪಸ್ಥಿತರಿದ್ದರು.