-8 C
New York
Monday, December 23, 2024

Buy now

spot_img

ಬ್ರೇಕಿಂಗ್ : ಮೈಸೂರು ದಸರಾ ಜಂಬೂ ಸವಾರಿ ಮೇಲೆ ಉಗ್ರರ ಕರಿನೆರಳು: ಹೈಅಲರ್ಟ್ ಘೋಷಣೆ..!

ನವದೆಹಲಿ,ಅ.22: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೇಲೆ ಉಗ್ರರ ಕರಿನೆರಳು ಆವರಿಸಿದ್ದು, ತತ್‍ಕ್ಷಣವೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಿಗಿಭದ್ರತೆ ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ವಿಭಾಗ ಸೂಚನೆ ಕೊಟ್ಟಿದೆ.

ಈ ಹಿನ್ನಲೆಯಲ್ಲಿ ಕೇಂದ್ರ ಗುಪ್ತಚರ ವಿಭಾಗದ ಮುಖ್ಯಸ್ಥರು ಕರ್ನಾಟಕದ ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರು ಮತ್ತು ಪೊಲೀಸ್ ಮಹಾನಿರ್ದೇಶಕರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಮೈಸೂರು ಮತ್ತು ಮಂಗಳೂರಿನಲ್ಲಿ ಭದ್ರತೆ ಹೆಚ್ಚಳ ಮಾಡಬೇಕೆಂದು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮೈಸೂರು ಹಾಗೂ ಮಂಗಳೂರಿನಲ್ಲಿ ದಸರಾ ಹಬ್ಬದ ಕೊನೆಯ ದಿನದವರೆಗೂ ಎಲ್ಲೆಡೆ ಬಿಗಿಭದ್ರತೆ ಕೈಗೊಂಡು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ಪಾಕಿಸ್ತಾನ ಹಾಗೂ ಐಸಿಸ್ ಉಗ್ರಗಾಮಿ ಸಂಘಟನೆಯ 70 ಉಗ್ರರು ನಕಲಿ ಪಾಸ್‍ ಪೋರ್ಟ್ ಪಡೆದು ಭಾರತದೊಳಗೆ ನುಸುಳಿದ್ದು, ನವರಾತ್ರಿ ಸಂದರ್ಭದಲ್ಲಿ ಕರ್ನಾಟಕದ ಮೈಸೂರು, ಪಶ್ಚಿಮ ಬಂಗಾಳದ ಕೋಲ್ಕತ್ತಾ ಹಾಗೂ ಗುಜರಾತ್‍ನ ಅಹದಾಬಾದ್ ನಗರಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆಂದು ಎಚ್ಚರಿಕೆ ಕೊಟ್ಟಿದೆ.

ವಿಶ್ವವಿಖ್ಯಾತ ಮೈಸೂರಿನ ದಸರಾದಂತೆ ಪಶ್ಚಿಮ ಬಂಗಾಳದ ಕಾಳಿ ಉತ್ಸವ ಹಾಗೂ ಗುಜರಾತ್‍ನ ನವರಾತ್ರಿ ಉತ್ಸವದ ಸಂದರ್ಭದಲ್ಲಿ ರಕ್ತದೋಕುಳಿ ನಡೆಸಲು ಪಾಕ್ ಹಾಗೂ ಐಸಿಸ್‍ನ 70 ಉಗ್ರರು ನಕಲಿ ಪಾಸ್‍ ಪೋರ್ಟ್ ಪಡೆದು ಒಳನುಸುಳಿರುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದೆ.

ದಸರಾ ವೀಕ್ಷಣೆಗೆ ದೇಶ-ವಿದೇಶದಿಂದ ಲಕ್ಷಾಂತರ ಸಂಖ್ಯೆ ಸಾರ್ವಜನಿಕರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಣ್ಣದೊಂದು ಅಹಿತಕರ ಘಟನೆ ನಡೆಯದಂತೆ ಭದ್ರತೆ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಸೂಚನೆ ಹಿನ್ನಲೆಯಲ್ಲಿ ಮೈಸೂರು, ಕೆಎಸ್‍ಆರ್ ಅಣೆಕಟ್ಟು, ಎಲ್ಲೆಡೆ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಗರಕ್ಕೆ ಆಗಮಿಸುವ ಹೊರರಾಜ್ಯದ ವಿದೇಶಿ ಪ್ರವಾಸಿಗರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮೈಸೂರಿನ ಲಾಡ್ಜ್ , ಹೋಂ ಸ್ಟೇ, ಹೋಟೆಲ್‍ಗಳು, ಐಬಿ ಸೇರಿದಂತೆ ಮತ್ತಿತರ ಕಡೆ ಕಳೆದ ರಾತ್ರಿಯಿಂದಲೇ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತಿತರ ಕಡೆ ನಗರಕ್ಕೆ ಬರುವವರ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿಯೊಂದನ್ನು ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಈಗಾಗಲೇ ಲಾಡ್ಜ್ ಹೋಂ ಸ್ಟೇ ಮತ್ತಿತರ ಕಡೆ ಉಳಿದುಕೊಂಡಿರುವವರ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಉಗ್ರರು ಸ್ಥಳೀಯರ ರೂಪದಲ್ಲಿ ಹೊಂಚು ಹಾಕಿ ದಾಳಿ ಮಾಡಬಹುದೆಂಬ ಹಿನ್ನಲೆಯಲ್ಲಿ ಭದ್ರತೆಗಾಗಿ ಮೂರುವರೆ ಸಾವಿರ ಪೊಲೀಸರು, ಕೆಎಸ್‍ಆರ್‍ಪಿ, ಆರ್‍ಎಎಫ್, ಗುಪ್ತಚರ ವಿಭಾಗದವರು ದಸರಾ ಹಬ್ಬ ಮುಗಿಯುವವರೆಗೂ ಕರ್ತವ್ಯದಲ್ಲಿರಬೇಕೆಂದು ಸೂಚನೆ ಕೊಡಲಾಗಿದೆ.ಮೈಸೂರು ಮಾತ್ರವಲ್ಲದೆ ಶ್ರೀರಂಗಪಟ್ಟಣ, ಮಡಿಕೇರಿ, ಕೆಆರ್‍ಎಸ್ ಅಣೆಕಟ್ಟಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ ಕೇಂದ್ರದಿಂದಲೂ ಮೈಸೂರಿಗೆ ಕ್ಷಿಪ್ರ ಕಾರ್ಯಪಡೆಯ ಒಂದು ತಂಡ ಆಗಮಿಸಿದೆ ಎಂದು ಹೇಳಲಾಗುತ್ತಿದೆ.

ಉಗ್ರರ ಹಿಟ್ ಲಿಸ್ಟ್‍ನಲ್ಲಿ ಮೈಸೂರು ಇರುವ ಕಾರಣ ಸಂಭಾವ್ಯ ದಾಳಿಯನ್ನು ತಡೆಯಲು ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ನುರಿತ ತಂಡವನ್ನು ಕಳುಹಿಸಿಕೊಡಲಾಗಿದೆ.ದಸರಾ ಹಬ್ಬದ ಜೊತೆಗೆ ಪ್ರಸ್ತುತ ದೇಶದಲ್ಲಿ ಐಸಿಸಿ ವಿಶ್ವಕಪ್ ಪಂದ್ಯ ನಡೆಯುತ್ತಿರುವುದರಿಂದ ಪಂದ್ಯವನ್ನು ವೀಕ್ಷಿಸಲು ವಿದೇಶಗಳಿಂದ ಭಾರತಕ್ಕೆ ಆಗಮಿಸಿದ್ದಾರೆ.

ಕೆಲ ಉಗ್ರರು ಪ್ರೇಕ್ಷಕರ ಸೋಗಿನಲ್ಲಿ ನಕಲಿ ಪಾಸ್‍ ಪೋರ್ಟ್ ಪಡೆದು ಭಾರತದೊಳಗೆ ಒಳನಸುಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಕೇಂದ್ರ ಗುಪ್ತಚರ ವಿಭಾಗ ಕರ್ನಾಟಕ ಸರ್ಕಾರಕ್ಕೆ ನಾಡಹಬ್ಬ ಮೈಸೂರು ದಸರಾಕ್ಕೆ ಯಾವುದೇ ರೀತಿಯ ಸಣ್ಣ ಚ್ಯುತಿಯೂ ಬಾರತದಂತೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles