-4.7 C
New York
Tuesday, December 24, 2024

Buy now

spot_img

ಪ್ರಾದೇಶಿಕ ಭಾಷೆಗಳ ಉಳಿವು ದೊಡ್ಡ ಸವಾಲು : ಬಸವಪ್ರಭು ಶ್ರೀ

ಚಿತ್ರದುರ್ಗ : ಬದಲಾಗುತ್ತಿರುವ ಜಾಗತಿಕ ಮತ್ತು ಮಾರುಕಟ್ಟೆಯ ನೀತಿಗಳಿಂದಾಗಿ ಕನ್ನಡದಂತಹ ಪ್ರಾದೇಶಿಕ ಭಾಷೆಗಳನ್ನು ಉಳಿಸಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.

ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ತೃತೀಯ ಬಿ.ಎ ಐಚ್ಛಿಕ ಪಠ್ಯಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅರಿವನ್ನು ಮೂಡಿಸುವ ಮೂಲಕ ನಮ್ಮ ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ, ಜ್ಞಾನದ ಭಾಷೆಯಾಗಿ, ಉದ್ಯೋಗದ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಪ್ರೇರೇಪಿಸುವ ಕೆಲಸಗಳು ಇಂತಹ ಕಾರ್ಯಾಗಾರದ ಮೂಲಕ ಸಾಧ್ಯಾವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಜೆ.ಎಂ. ವಿದ್ಯಾಪೀಠದ ಮಾನವ ಸಂಪನ್ಮೂಲ ನಿರ್ದೇಶಕರಾದ ಶ್ರೀಮತಿ ವಿಜಯ ಕೆ. ಮಠ್ ಮಾತನಾಡಿ, ಕನ್ನಡದ ಮೂಲಕವೇ ನಾವು ಜಗತ್ತನ್ನ ಕಾಣಬೇಕು. ಆ ಮೂಲಕವೇ ಭಾಷೆಯನ್ನು ಬೆಳೆಸಬೇಕು. ನಮ್ಮ ಮಾತೃಭಾಷೆಯ ಮೂಲಕ ಇತರ ಎಲ್ಲಾ ಜ್ಞಾನಗಳನ್ನು ಅರಿಯಲು ಸಾಧ್ಯ. ಆದ್ದರಿಂದ ಭಾಷೆ ಎನ್ನುವುದು ಮನುಷ್ಯನ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳ ಪ್ರತೀಕ ಎಂದು ಹೇಳಿದರು.

ಕಾರ್ಯಾಗಾರದ ಕುರಿತು ದಾ.ವಿ.ವಿ. ಕನ್ನಡ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಅವರು ತಮ್ಮ ಆಶಯ ನುಡಿಗಳಲ್ಲಿ ಬದಲಾಗುತ್ತಿರುವ ವಿದ್ಯಾಮಾನಗಳಿಗನುಗುಣವಾಗಿ ನಮ್ಮ ಶಿಕ್ಷಣ ನೀತಿಯಲ್ಲೂ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿದ್ದು ಜಾಗತೀಕರಣದ ಈ ಹೊತ್ತಿನಲ್ಲಿ ದೇಶೀಯ ಭಾಷೆಗಳ ಮೂಲಕ ಪರಂಪರೆಯ ಅರಿವನ್ನು ವಿಸ್ತರಿಸುವ ಜವಾಬ್ದಾರಿ ನಮ್ಮದಾಗಿದ್ದು ಆ ಮೂಲಕ ಯುವ ತಲೆಮಾರಿನಲ್ಲಿ ಉತ್ತಮ ನಾಗರೀಕ ವ್ಯಕ್ತಿತ್ವದ, ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕೇಶೀರಾಜನ ಶಬ್ದಮಣಿದರ್ಪಣಂ ಕೃತಿ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಎಸ್.ಎಸ್. ಅಂಗಡಿಯವರು ಮಾತನಾಡಿ ಕೇಶೀರಾಜನ ಶಬ್ದಮಣಿ ದರ್ಪಣ ಕೃತಿಯು ಹಳೆಗನ್ನಡದ ವ್ಯಾಕರಣವನ್ನು ಕುರಿತು ಹೇಳುವ ಒಂದು ಗ್ರಂಥಮಾತ್ರವಲ್ಲದೇ ಪ್ರಾಚೀನ ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಸ್ತಾರದ ಅರಿವನ್ನು ಮೂಡಿಸುವ ಕೃತಿಯಾಗಿದೆ. ಕೇಶೀರಾಜ ಕನ್ನಡ ಭಾಷೆಯ ಕುರಿತು ವಿಶೇಷವಾಗಿ ಅಕ್ಷರ, ನಾಮ, ಸಂಧಿ, ಸಮಾಸ, ಅಖ್ಯಾತ ಮುಂತಾದ ಪ್ರಕರಣಗಳಲ್ಲಿ ಇಡೀ ಪ್ರಾಚೀನ ಕನ್ನಡ ವ್ಯಾಕರಣ ಪರಂಪರೆಯನ್ನು ದಾಖಲಿಸುವ ಬಹುದೊಡ್ಡ ಕೆಲಸವನ್ನು ಮಾಡಿದ್ದು ತನ್ನ ಕಾಲದ ಕವಿ ಸಾಹಿತಿಗಳ ಹಿನ್ನೆಲೆಯಲ್ಲಿ ಬರೆದಿದ್ದು, ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸಂಗತಿ ಎಂದರು.

ಕನ್ನಡ ಭಾಷೆ ಮತ್ತು ಭಾಷಾ ವಿಜ್ಞಾನ-ಇತ್ತೀಚಿನ ಬೆಳವಣಿಗೆಗಳು- ಈ ವಿಷಯ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತಿ ಕುಲಪತಿಗಳಾದ ಪ್ರೊ.ಎ.ಮುರಿಗೆಪ್ಪನವರು ಮಾತನಾಡಿ ಭಾಷೆ ಎನ್ನುವುದು ಮಾನವನ ಅತ್ಯಂತ ಪ್ರಮುಖ ಆವಿಷ್ಕಾರ, ಇದು ದೈವದತ್ತವಲ್ಲ, ಮಾನವನೇ ತುಂಬಾ ಪ್ರಯತ್ನದಿಂದ ಸಂಪಾದಿಸಿದುದಾಗಿದೆ. ಜಗತ್ತಿನಲ್ಲಿ ಭಾಷೆಯ ಉಗಮವನ್ನು ಕುರಿತು ತುಂಬಾ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನೆ ನಡೆದಿವೆ ಈಗಲೂ ನಡೆಯುತ್ತಿವೆ ಭಾಷೆ ಎನ್ನುವುದು ನಿಂತ ನೀರಲ್ಲ ಸದಾ ಹರಿಯುವ ಹೊಳೆಯಂತೆ, ಈ ಚಲನಶೀಲತೆಯೇ ಭಾಷೆಗೆ ಜೀವಂತಿಕೆಯನ್ನು ತಂದು ಕೊಡುತ್ತದೆ. ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವನ್ನುಳ್ಳ ಕನ್ನಡ ಭಾಷೆ ಕಾಲಕಾಲಕ್ಕೆ ಎದುರಾದ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದರೂ ಉಳಿದುಕೊಂಡು ಬಂದಿದೆ. ಹಾಗೂ ಭಾಷೆ ಉಳಿಯುವುದು ಆ ಭಾಷೆಯನ್ನಾಡುವ ಜನರಿಂದ. ಕನ್ನಡದಂತಹ ಪ್ರಾದೇಶಿಕ ಭಾಷೆ ಹಲವು ವೈವಿದ್ಯತೆಗಳಿಂದ ಕೂಡಿದ್ದು ನಾಡಿನ ಬೇರೆಬೇರೆ ಭಾಗಗಳಲ್ಲಿ ಅದರದ್ದೇ ಆದ ವಿಶಿಷ್ಟ ಉಚ್ಛಾರ ಅನುಸರಣೆ ಇದೆ. ಇದುವೇ ಭಾಷೆಯ ವೈವಿಧ್ಯತೆಗೆ ಕಾರಣವಾಗಿದೆ. ಕಾಲಕಾಲಕ್ಕೆ ಕನ್ನಡ ಭಾಷೆಯಲ್ಲಾಗುತ್ತಿರುವ ಈ ಬದಲಾವಣೆಗಳು ಕನ್ನಡವನ್ನು ಇನ್ನಷ್ಟು ಪೂರ್ಣಗೊಳಿಸುತ್ತಿವೆ. ಭಾಷೆಯಲ್ಲಿ ಈ ಬಗೆಯ ಭಾಷಿಕ ಪರಿವರ್ತನೆ ಧ್ವನಿ ಪರಿವರ್ತನೆ ಮತ್ತು ಅರ್ಥ ಪರಿವರ್ತನೆಗಳೇ ಕನ್ನಡದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ.ಎಸ್.ಹೆಚ್.ಪಂಚಾಕ್ಷರಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಾಷೆ ಎನ್ನುವುದು ಮನುಷ್ಯನನ್ನು ಇತರೆ ಪ್ರಾಣಿ ಜೀವಿಗಳಿಂದ ಭಿನ್ನವಾಗಿಸಿದೆ. ಭಾಷೆಯ ಕಾರಣಕ್ಕಾಗಿಯೇ ಮನುಷ್ಯ ಈ ಹೊತ್ತು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಯಲು ಸಾಧ್ಯವಾಗಿದೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಪರಂಪರೆಯುಳ್ಳ ಕನ್ನಡ ಭಾಷೆ ಮತ್ತು ಸಾಹಿತ್ಯ ನಮ್ಮ ನಾಡಿನ ಸಂಸ್ಕೃತಿಯನ್ನು ದಾಖಲು ಮಾಡುತ್ತಾ ಬಂದಿದೆ. ಇಂತಹ ಭವ್ಯ ಪರಂಪರೆ ಭಾಷೆ ನಮ್ಮದು ಎಂಬುವುದು ಎನ್ನುವುದೆ ಹೆಮ್ಮೆ ಎಂದು ಹೇಳಿದರು.

ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಪದವಿ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರುಗಳು, ಐ.ಕ್ಯೂ.ಎ.ಸಿ.ಸಂಯೋಜಕರಾದ ಡಾ.ಹರ್ಷವರ್ಧನ್ ಮತ್ತು ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ.ಆರ್.ಕೆ.ಕೇದಾರನಾಥ್ ಪ್ರೊ.ಎಲ್.ಶ್ರೀನಿವಾಸ್ ಪ್ರೊ.ಸಿ.ಎನ್.ವೆಂಕಟೇಶ್, ಡಾ.ಸತೀಶ್ ನಾಯ್ಕ್ , ಪ್ರೊ.ನಾಗರಾಜ್, ಪ್ರೊ.ಮಂಜುನಾಥಸ್ವಾಮಿ, ಪ್ರೊ.ಸ್ವಾಮಿ, ಪ್ರೊ.ಎನ್.ಚಂದಮ್ಮ, ಮಧು.ವಿ.ಇ, ಮೋಹನ್ ಹಾಗೂ ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿನಿ ಕು. ಕಾವ್ಯಾ.ಎಸ್. ಇವರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಅದ್ಯಾಪಕರ ವೇದಿಕೆಯ ಅಧ್ಯಕ್ಷರಾದ ಪ್ರೊ.ಜಿ.ಎನ್.ಬಸವರಾಜಪ್ಪ ಸ್ವಾಗತಿಸಿದರು. ವೇದಿಕೆಯ ಖಜಾಂಚಿ ಪ್ರೊ.ಅಂಜನಪ್ಪ.ಡಿ ವಂದಿಸಿದರು. ಕನ್ನಡ ವಿಭಾಗದ ಡಾ.ಬಿ.ರೇವಣ್ಣ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles